ಧ್ರುವಕರಡಿ
ಉತ್ತರ ಧ್ರುವವಾಸಿಯಾದ ಒಂದು ಜಾತಿಯ ಕರಡಿ.  (ಪೋಲಾರ್ ಬೇರ್).  ಶ್ವೇತ ಕರಡಿ, ಹಿಮಕರಡಿ, ಸಮುದ್ರಕರಡಿ ಪರ್ಯಾಯ  ನಾಮಗಳು.  ತಲಾರ್‍ಕ್ಟಾಸ್ಮ್ಯಾರಿಟಿಮ್ ಇದರ ಶಾಸ್ತ್ರೀಯ ಹೆಸರು.  ಅಮೆರಿಕದ ಕಂದು ಕರಡಿಯಷ್ಟೇ ಗಾತ್ರದ್ದು.  ಅದರ ಅದರಷ್ಟು ದಷ್ಟಪುಷ್ಟವಾಗಿಲ್ಲ. ಇದರ ಮೈಬಣ್ಣ ಬಿಳಿ.  ಇಳಿವಯಸ್ಸಿನಲ್ಲಿ ಮೈ ಕಂದುಬಣ್ಣವನ್ನು ತಳೆಯುವುದುಂಟು.  ಕತ್ತು ಸ್ವಲ್ಪ ಉದ್ದವಾದದ್ದೂ ಬಾಗುವಂಥದೂ ಆಗಿದೆ. ಸಾಮಾನ್ಯವಾಗಿ ಇದು ಸಾಗರದ ತೇಲುವ ಹಿಮಗಡ್ಡೆಗಳ ಮೇಲೆ ಜೀವಿಸುವುದು.  ಭೂಮಿಯ ಮೇಲೆ ಬರುವುದು ಅಪರೂಪ.  ಇದರ ಅಂಗಾಲಿನ ಮೇಲೂ ತುಪ್ಪಳ ಇರುವುದು ಇದರ ವಿಶೇಷ ಲಕ್ಷಣ.  ಇದರಿಂದಾಗಿ ಅಂಗಾಲನ್ನು ಬೆಚ್ಚಗಿಟ್ಟಿರಲೂ ಅನುಕೂಲ.  ಇದರ ಮೈಬಣ್ಣ ಬಿಳಿಯಾದ್ದರಿಂದ ಇದು ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.  ಧ್ರುವಕರಡಿ ಕರಡಿಗಳಲ್ಲೆಲ್ಲ ಹೆಚ್ಚು ಅಲೆಮಾರಿ ಎನಿಸಿಕೊಂಡಿವೆ.  ಆಹಾರಾನ್ವೇಷಣೆಗಾಗಿ ಬಲು  ದೂರ ಸಂಚರಿಸುತ್ತದೆ.  ಸಾಮಾನ್ಯವಾಗಿ ಇದು ಮಾಂಸಾಹಾರಿಯಾದರೂ, ಕೆಲವು ವೇಳೆ ಹಣ್ಣು ಕಾಯಿಗಳನ್ನು ಕೂಡ ತಿನ್ನುವುದುಂಟು.  ಸೀಲ್ ಪ್ರಾಣಿ ಇದರ ಮೆಚ್ಚಿನ ಆಹಾರ. ಮೀನು, ಪಕ್ಷಿಗಳು, ಮರಿ ಕಡಲಸಿಂಹಗಳು ಮತ್ತು ಸತ್ತ ತಿಮಿಂಗಲದ ಮಾಂಸವನ್ನು ಕೂಡ ಸೇವಿಸುತ್ತದೆ.  ಆಹಾರವನ್ನು ವಾಸನೆಯ ಮೂಲಕ ಪತ್ತೆ ಹಚ್ಚುತ್ತದೆ.  ಇದು ಒಳ್ಳೆಯ ಈಜುಗಾರ. ಗಂಟೆಗೆ 4 ಕಿ.ಮೀ. ವೇಗದಲ್ಲಿ ಈಜಬಲ್ಲುದು.  ಇದು ಸಾಮಾನ್ಯವಾಗಿ 2.5 ಮೀ. ಉದ್ದ ಬೆಳೆಯುವುದುಂಟು.  ಇದರ ಎತ್ತರ (ಭುಜದ ಬಳಿ)  1.6 ಮೀ ತೂಕ ಸುಮಾರು 410 ಕಿ.ಗ್ರಾಂ.  (ಹೆಣ್ಣು ಕರಡಿ ಸುಮಾರು 320 ಕಿ.ಗ್ರಾಂ.   ತೂಗುತ್ತದೆ).  ಇದಕ್ಕೆ ನಲವತ್ತೆರಡು ಹಲ್ಲುಗಳುಂಟು.  ಪಂಚಾಗುಲೀಯವಾದ ಇದರ ಬೆರಳುಗಳ ಕೊನೆಯಲ್ಲಿ ಪಂಜಗಳುಂಟು.  ಇದರಿಂದ ಇದಕ್ಕೆ ಅಗೆಯಲು ಮತ್ತು ಹತ್ತುವುದಕ್ಕೆ  ಸಾಧ್ಯವಾಗುತ್ತದೆ.  ಧ್ರುವಕರಡಿಗಳಲ್ಲಿ ಸಾಮಾನ್ಯವಾಗಿ ಶಿಶಿರನಿದ್ರೆ (ಹೈಬರ್‍ನೇಷನ್) ಇಲ್ಲ.  ಆದರೆ ಹೆಣ್ಣು ಧ್ರುವಕರಡಿ ಗರ್ಭಧರಿಸಿದ ಕಾಲದಲ್ಲಿ ಚಳಿಗಾಲವನ್ನು ಶಿಶಿರನಿದ್ರೆಯಲ್ಲಿ  ಕಳೆಯುತ್ತದೆ.   ಈ ಕರಡಿಯ ದೇಹದ ಕೊಬ್ಬು ಮಾರುಕಟ್ಟೆಯಲ್ಲಿ ಕರಡಿಯಗೀಜ್ ಎಂದು ಪ್ರಸಿದ್ಧಿಯಾಗಿದೆ.  ಸಂತಾನವೃದ್ಧಿಯ ಶ್ರಾಯ ಬೇಸಿಗೆ, ಗಂಡು ಹೆಣ್ಣುಗಳು ಕೂಡುವುದು ಎರಡು ವರ್ಷಕ್ಕೊಮ್ಮೆ.  ಒಮ್ಮೆಗೆ ಎರಡು ಮರಿಗಳು ಹುಟ್ಟುವುವು.  ಮರಿಗಳು ತಾಯಿಯ ಜೊತೆಯಲ್ಲೇ 17 ತಿಂಗಳುಗಳ ಕಾಲವಿರುತ್ತವೆ.  ಇದರ ಮಾಂಸ ರುಚಿಕರವಾಗಿದ್ದರೂ, ಇದರ ಪಿತ್ತಜನಕಾಂಗದಲ್ಲಿ ವೈಟಮಿನ್ ಎ ಅತ್ಯಧಿಕ ಮೊತ್ತದಲ್ಲಿರುವುದರಿಂದ ಇದರ ಮಾಂಸ ವಿಷಪೂರಿತವೆಂದು ಕಂಡುಬಂದಿದೆ.  ಎಸ್ಕಿಮೊ ಜನ ತಮ್ಮ ಉಡುಗೆ ತೊಡಿಗೆಗಳಿಗಾಗಿ ಇದರ ಚರ್ಮವನ್ನು ಬಳಸುವರು. 
(ಎಸ್.ಎಸ್.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ